ತಾನಾಜಿ ಮಾಲುಸರೆ - 
ಮರಾಠಾ ಸಾಮ್ರಾಜ್ಯ ಸ್ಥಾಪಕನಾದ ಶಿವಾಜಿಯ (1627 -1680) ನೆಚ್ಚಿನ ಬಂಟ. ಬಾಲ್ಯಸ್ನೇಹಿತ. ಪ್ರತಾಪಗಡದ ಸಮೀಪದಲ್ಲಿರುವ ಉಮರಾಠೆ ಈತನ ಜನ್ಮಸ್ಥಳ. ಶಿವಾಜಿಯಲ್ಲಿ ಬಾಲ್ಯದಿಂದಲೂ ಅಚ್ಚಳಿಯದ ಪ್ರೀತಿ ವಿಶ್ವಾಸಗಳನ್ನಿಟ್ಟಿದ್ದ ಈತ. ಅವನ ಆರಂಭ ಕಾಲದ ಅನೇಕ ಸಾಹಸಗಳಲ್ಲಿ ಸಕ್ರಿಯ ಪಾಲುಗಾರನಾಗಿದ್ದ. ಅಫಜûಲ್‍ಖಾನನನ್ನು ಎದುರಿಸಿದ ಸಂದರ್ಭದಲ್ಲಿ ಖಾನನ ಸಯದ್ ಬಂಡಾ ಎಂಬ ಅಂತರಕ್ಷಕನನ್ನು ಈತ ಸದೆಬಡಿದ. ಇವನು 12,000 ಪದಾತಿಗಳ ಸುಬೇದಾರನಾಗಿದ್ದ.

ಔರಂಗ್eóÉೀಬನ ಪಕ್ಷಕ್ಕೆ ಸೇರಿದ ಉದೇಭಾನನೆಂಬ ರಜಪೂತನ ವಶದಲ್ಲಿದ್ದ ಕೊಂಡಾಣಾ ಎಂಬ ಕೋಟೆಯನ್ನು ವಶಪಡಿಸಿಕೊಳ್ಳಲು ಶಿವಾಜಿ ಇವನನ್ನು ನೇಮಿಸಿ ಕಳಿಸಿದ. ಕೊಂಡಾಣಾ ಕೋಟೆ ದುರ್ಭೇದ್ಯವಾಗಿತ್ತು. ತಾನಾಜಿಯ ನೇತೃತ್ವದಲ್ಲಿ ಒಂದು ಸಾರಿ ಸುಸಜ್ಜಿತ ಮಾವಳಿಗರು ಕೋಟೆಗೆ ಮುತ್ತಿಗೆ ಹಾಕಿದರು. ಕೋಟೆಯ ಸುತ್ತ ಮುಳ್ಳುಗಿಡಗಳಿದ್ದವು. ಕೋಟೆಯ ಒಳಗೆ ಬಲವಾದ ಕಾವಲಿತ್ತು. ಎರಡೂ ಪಕ್ಷಗಳ ನಡುವೆ ಭೀಕರ ಹೋರಾಟ ನಡೆಯಿತು. ಅನೇಕ ಮರಾಠಾ ಸಿಪಾಯಿಗಳೂ ರಜಪೂತ ಸೈನಿಕರೂ ಹತರಾದರು. ರಜಪೂತ ಪ್ರಮುಖ ಉದೇಭಾನನನಿಗೂ ತಾನಾಜಿಗೂ ನಡೆದ ಹೋರಾಟದಲ್ಲಿ ಇಬ್ಬರೂ ಗಾಯಗೊಂಡು ಮಡಿದರು. ತಾನಾಜಿಯ ಮರಣದಿಂದ ಮರಾಠರು ಧೈರ್ಯಗುಂದಿ ಹೆಮ್ಮೆಟ್ಟಲಾರಂಭಿಸಿದರು. ತಾನಾಜಿಯ ಸಹೋದರ ಸೂರ್ಯಾಜಿ ಮರಾಠಾ ಸೈನ್ಯವನ್ನು ಹುರಿದುಂಬಿಸಿ ಕೋಟೆಯ ಒಳಗೆ ನುಗ್ಗುವಂತೆ ಮಾಡಿದ. ಕೋಟೆ ಮರಾಠರ ವಶವಾಯಿತು. ವಿಜಯದ ವಿಷಯವನ್ನು ತಿಳಿದು ಶಿವಾಜಿಗೆ ಸಂತೋಷವಾಯಿತು. ಆದರೆ ತಾನಾಜಿಯ ಮರಣ ಅವನಿಗೆ ವ್ಯಥೆಯನ್ನುಂಟು ಮಾಡಿತು. ಕೋಟೆ ಬಂತು. ಆದರೆ ಸಿಂಹ ಹೋಯಿತು (ಗಡ್ ಅಲಾ ಪಣ್ ಸಿಂಹ್ ಗೇಲಾ) ಎಂದು ಶಿವಾಜಿ ಉದ್ಗರಿಸಿದ. ಹತ್ತು ದಿನಗಳ ಕಾಲ ಶಿವಾಜಿ ಶೋಕವನ್ನಾಚರಿಸಿದ.

ಸಿಂಹದಂತೆ ಶೂರನಾಗಿದ್ದ ತಾನಾಜಿಯ ಜ್ಞಾಪಕಾರ್ಥವಾಗಿ ಶಿವಾಜಿ ಕೊಂಡಾಣಾಗೆ ಸಿಂಹಗಡವೆಂಬ ಹೆಸರಿಟ್ಟ. ತಾನಾಜಿ ಮಡಿದು ಬಿದ್ದ ಸ್ಥಳದಲ್ಲಿ ಅವನು ಒಂದು ಸ್ಮಾರಕವನ್ನು ಕಟ್ಟಿಸಿದ. ಈ ಪೀಠವನ್ನು ವೀರಾಸನ ಇಂದು ಕರೆಯುತ್ತಾರೆ. ಪ್ರತಿವರ್ಷವೂ ಸಿಂಹಗಢದಲ್ಲಿ ತಾನಾಜಿಯ ಉತ್ಸವ ನಡೆಯುತ್ತದೆ.

ತಾನಾಜಿಯ ಈ ವೀರಕೃತ್ಯ ಅಂದಿನ ಮರಾಠರ ಮೇಲೆ ತನ್ನ ಅಚ್ಚಳಿಯದ ಪ್ರಭಾವ ಬೀರಿತು. ಈ ಘಟನೆಯನ್ನು ಆಧರಿಸಿ ಮರಾಠಿಯಲ್ಲಿ ಅನೇಕ ವೀರ ಗಾಥೆಗಳು ಲಾವಣಿಗಳೂ ಹುಟ್ಟಿಕೊಂಡವು, ಮುಂದಿನ ಅನೇಕ ಮರಾಠಿ ಕವಿಗಳಿಗೆ ತಾನಾಜಿಯ ಶೌರ್ಯ ಸ್ಫೂರ್ತಿ ಒದಗಿಸಿದೆ. ಇಂದಿಗೂ ತಾನಾಜಿಯನ್ನು ಕುರಿತು ಲಾವಣಿಗಳು ಮಹಾರಾಷ್ಟ್ರದಲ್ಲಿ ಪ್ರಚಾರದಲ್ಲಿವೆ.
(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ